Monday, November 30, 2009

ಇದೆಯೆ ನಿನಗೆ ಸಮಯ, ಇದೆಯೆ ನಿನಗೆ ಸಮಯಾ..
ಅಲೆದಾಡಲಿಕೆ, ಜೊತೆ ಹಾಡಲಿಕೆ, ಚ೦ದ್ರನ ನೋಡಲಿಕೆ.. ನಿನಗೆ ಸಮಯಾ,
ಇದೆಯೆ ನಿನಗೆ ಸಮಯಾ..


ಧ್ಯಾನವಾ ಕಲಿತೆನು ದಾರಿಯಾ ಕಾಯುತ, ದಾಹವಾ ಮರೆತೆನು ನಿನ್ನಯಾ ಮೋಹಿತ, ನೀ ಕೇಳಲಾರೆಯಾ..
ನೆನೆದಾಕ್ಷಣವೆ ಕರೆ ಮಾಡಲಿಕೆ.. ಕಾಗದ ಓದಲಿಕೆ... ನಿನಗೆ ಸಮಯಾ
ಇದೆಯೆ ನಿನಗೆ ಸಮಯ, ಇದೆಯೆ ನಿನಗೆ ಸಮಯಾ..

ಗಣಿತವ ಕಲಿತೆನು ನೆನಪನು ಎಣಿಸುತಾ, ಮೈ ಮನ ಅರಿತೆನು ಕನಸನು ಗುಣಿಸುತಾ, ನೀ ಕಾಣಲಾರೆಯ
ತಡ ಮಾಡಿದರೆ ಜಗಳಾಡಲಿಕೆ, ರಾಜಿಯ ಮಾಡಲಿಕೆ... ನಿನಗೆ ಸಮಯಾ
ಇದೆಯೆ ನಿನಗೆ ಸಮಯ, ಇದೆಯೆ ನಿನಗೆ ಸಮಯಾ..
ಅಲೆದಾಡಲಿಕೆ, ಜೊತೆ ಹಾಡಲಿಕೆ, ಚ೦ದ್ರನ ನೋಡಲಿಕೆ ನಿನಗೆ ಸಮಯಾ
ಇದೆಯೆ ನಿನಗೆ ಸಮಯಾ...
ನಿನ್ನ ನೆನಪು ಕಾಡದಂತೆ
---------------
ನಿನ್ನ ನೆನಪು ಕಾಡದಂತೆ
ಕವನ ಕಟ್ಟಿ ಹಾಡದಂತೆ
ತಡೆದೆ ನಾನು ನನ್ನನೆ

ಪ್ರೇಮ ಸ್ವಪ್ನ ನಲುಗದಂತೆ
ಭಾವ ಭವನ ಅಲುಗದಂತೆ
ಎಚ್ಚರಿಸಿದೆ ಮನವನೆ

ನಮ್ಮ ನಲವ ಭವ್ಯ ನಿಧಿಯ
ಕದಿಯ ಬಂದ ಕ್ರೂರ ವಿಧಿಯ
ಕೋರಿದೆ ಸುಸ್ವಾಗತ

ಹೊನ್ನಗಳಸ ಧರೆಗುರುಳಿರೆ
ಹಣ್ಣ ಬೆಳಸ ಹುಳ ಕೊರೆದಿರೆ
ಸಹಿಸಿದೆ ನಗೆ ಸೂಸೂತ

ನಾವು ಬೇರೆ ದಾರಿ ಹಿಡಿದು
ಅಗಲಿ ಬಹಳ ದೂರ ನಡೆದು
ಸಂದಿದೆ ಮನ್ವಂತರ

ಗಾಳಿ ಜೊತೆಯ ಧೂಳಿನಂತೆ
ನೆಲೆಸಿದೆ ಬಾಳಲ್ಲಿ ಸಂತೆ
ನೆನಹಿನ ಕರಿಬೆಂತರ

ನಮ್ಮ ನಲಿವು ನೋವು ತುಡಿತ
ಹಳೆಗಾಲದ ಒಲವ ಕಡತ
ಭೂತೆಕಾಲಘೋಶದಿ

ಪ್ರಣಯ ವಿರಹವೆರಡು ಸರದಿ
ಈ ವ್ಯಾಧಿಯು ಬಹು ಅನಾದಿ
ಮರೆವೆಯೆ ದಿವ್ಯೌಷಧಿ

ತಡೆದು ತಡೆದು ಚಿಮ್ಮುವಂಥ
ಚಿಲುಮೆಯಲ್ಲ ಬಾಳ ಪಂಥ
ನದಿಯ ತೆರ ನಿರಂತರ

ಹಿಂದೆ ನಿನ್ನ ನೆನಹನ್ನೊರಸಿ
ಗತದಿನಗಳ ಬದಿಗೆ ಸರಿಸಿ
ನಿರಮಮ ಬಹಿರಂತರ
ಬೇಸರಾಗಿದೆ ಮಾತು, ಭಾರವಾಗಿದೆ ಮೌನ;
ನೋವು ಕರಗಿದೆ ಕಣ್ಣಲ್ಲಿ;
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ.
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ;
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ.
ವರ್ಷಗಳ ಕೆಳಗೆ ರೋಮ ರೋಮದಲ್ಲು ಸ್ವಿಚ್ಚೊತ್ತಿದ್ದ
ಆಗುಂಬೆಯವಳ ಕೆನ್ನೆ ತುಟಿ ;
ಮೊನ್ನೆ ತಾನೇ ಸರ್ವೇಂದ್ರಿಯಗಳ ಡ್ರಿಲ್ಲುಮಾಡಿಸಿದ
ಸಿನಿಮಾನಟಿಯ ಸಾರ್ವಜನಿಕ ಕಟಿ ;
ಕೊಪ್ಪದಾಕೆಯ ಮೈಬಣ್ಣದ ಅಪ್ಪಟ
ಹೆಗ್ಗಡಿತಿತನದ ಝಳಪು ;
ಚಿಕ್ಕಂದಿನ ನೆನಪು ದೀಪಾವಳಿಸುವ ಮನೆಜವಾನಿ
ಸಕೀನಾಳ ಮೊಣಕಾಲ ಹೊಳಪು ;
ಕಣ್ಣು ವ್ಯಾಪಾರ ಬೆಳೆಸುವ
ಮನಸ್ಸು ಸದಾ ತಂಗಲೆಳೆಸುವ
ನಗೆಬಲೆಯ ಕೊಡಗಿಯ ಎಡಬೈತಲೆಯ
ತುಂಬು ತುರುಬಿನ ಹಸೆ ;
ಯಾರೋ ಮಲೆಯಾಳಿ ಮಂಗಳೆಯ
ಎರಡು ಅಮೃತದ ಬೊಗಸೆ---

ಥಟ್ಟನೆ ಕಾಡಿಸಿ,
ಅವನೆಲ್ಲ ಒಟ್ಟುಗೂಡಿಸಿ
ನಾ ಬರೆದ ಚಿತ್ರ
ಜಯನಗರದ ಹದಿನಾರನೆಯ ಬೀದಿಯನು ತಿಂಗಳ ಹಿಂದೆ
ಬೆಳುದಿಂಗಳಿಸಿದ ನೀನಾದದ್ದು ಹೇಗೆಂಬುದೇ
ನನ್ನ ತಲೆಕೆಡಿಸಿರುವ ವಿಚಿತ್ರ.

ಎಲ್ಲಾದರು ಇರು ಎಂತಾದರು ಇರು.......

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮುಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪಿಂಪಿನ ಬನವಾಸಿಗೆ ಕರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೊಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಒಂಪುಳಿಹೋಗುವ ಮನ
ಕನ್ನದವೇ ಸತ್ಯ ಕನ್ನದವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ಮಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಓ ನನ್ನ ಚೇತನ........

ಓ ನನ್ನ ಚೇತನ
ಆಗು ನೀ ಅನಿಕೇತನ

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಆನಂತವಾಗಿರು

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

ಬಾರಿಸು ಕನ್ನಡ ಡಿಂಡಿಮವ.......

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಸತ್ತಂತಿಹರನು ಬಡಿದೆಚ್ಚರಿಸು;
ಕಚ್ಚಾಡುವರನು ಕೂಡಿಸಿ ಒಲಿಸು.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ;
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ!

ಬಾರಿಸು ಕನ್ನಡ ಡಿಂಡಿಮವ,
ಓ ಕರ್ನಾಟಕ ಹೃದಯ ಶಿವ!