Monday, November 30, 2009

ಬೇಸರಾಗಿದೆ ಮಾತು, ಭಾರವಾಗಿದೆ ಮೌನ;
ನೋವು ಕರಗಿದೆ ಕಣ್ಣಲ್ಲಿ;
ಅಡಿಗೆ ಚುಚ್ಚಿದ ಮುಳ್ಳು ಒಳಗದೆ ಮುರಿಯದಂತೆ
ಭಾವ ಕುಟುಕಿದೆ ಮನದಲಿ.

ಮುರಿದ ಪ್ರೀತಿಯ ಮರೆಯೆ ಬಾಳಿನೊಳ ಹೊಕ್ಕಿರಲು
ಸಾವ ಭಯ ತಾನೆರಗಿತೊ.
ಮಯೆಗೆ ಆಸೆರೆ ಪಡೆಯೆ ಹಾವ ಹೆಡೆಯಲಿ ನಿಂತ
ಹಕ್ಕಿಯಂದದಿ ಚೀರಿತೊ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ
ಕನಸುವಂತೆಯೆ ಮೊಳಕೆಗೆ;
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ.

ಯಾವ ಕಾಡಿನ ಮರೆಯ ಮರದ ಕೊಂಬೆಯನರಸಿ
ಜೀವ ರೆಕ್ಕೆಯ ಬಿಚ್ಚಿತೊ;
ಯಾವ ಗವಿಗತ್ತಲಿನ ಮೌನ ಭಾರವ ಕನಸಿ
ಇದ್ದ ಹಕ್ಕೆಯ ಬಿಟ್ಟಿತೊ.

No comments:

Post a Comment