Monday, November 30, 2009

ವರ್ಷಗಳ ಕೆಳಗೆ ರೋಮ ರೋಮದಲ್ಲು ಸ್ವಿಚ್ಚೊತ್ತಿದ್ದ
ಆಗುಂಬೆಯವಳ ಕೆನ್ನೆ ತುಟಿ ;
ಮೊನ್ನೆ ತಾನೇ ಸರ್ವೇಂದ್ರಿಯಗಳ ಡ್ರಿಲ್ಲುಮಾಡಿಸಿದ
ಸಿನಿಮಾನಟಿಯ ಸಾರ್ವಜನಿಕ ಕಟಿ ;
ಕೊಪ್ಪದಾಕೆಯ ಮೈಬಣ್ಣದ ಅಪ್ಪಟ
ಹೆಗ್ಗಡಿತಿತನದ ಝಳಪು ;
ಚಿಕ್ಕಂದಿನ ನೆನಪು ದೀಪಾವಳಿಸುವ ಮನೆಜವಾನಿ
ಸಕೀನಾಳ ಮೊಣಕಾಲ ಹೊಳಪು ;
ಕಣ್ಣು ವ್ಯಾಪಾರ ಬೆಳೆಸುವ
ಮನಸ್ಸು ಸದಾ ತಂಗಲೆಳೆಸುವ
ನಗೆಬಲೆಯ ಕೊಡಗಿಯ ಎಡಬೈತಲೆಯ
ತುಂಬು ತುರುಬಿನ ಹಸೆ ;
ಯಾರೋ ಮಲೆಯಾಳಿ ಮಂಗಳೆಯ
ಎರಡು ಅಮೃತದ ಬೊಗಸೆ---

ಥಟ್ಟನೆ ಕಾಡಿಸಿ,
ಅವನೆಲ್ಲ ಒಟ್ಟುಗೂಡಿಸಿ
ನಾ ಬರೆದ ಚಿತ್ರ
ಜಯನಗರದ ಹದಿನಾರನೆಯ ಬೀದಿಯನು ತಿಂಗಳ ಹಿಂದೆ
ಬೆಳುದಿಂಗಳಿಸಿದ ನೀನಾದದ್ದು ಹೇಗೆಂಬುದೇ
ನನ್ನ ತಲೆಕೆಡಿಸಿರುವ ವಿಚಿತ್ರ.

No comments:

Post a Comment