Monday, November 30, 2009

ನಿನ್ನ ನೆನಪು ಕಾಡದಂತೆ
---------------
ನಿನ್ನ ನೆನಪು ಕಾಡದಂತೆ
ಕವನ ಕಟ್ಟಿ ಹಾಡದಂತೆ
ತಡೆದೆ ನಾನು ನನ್ನನೆ

ಪ್ರೇಮ ಸ್ವಪ್ನ ನಲುಗದಂತೆ
ಭಾವ ಭವನ ಅಲುಗದಂತೆ
ಎಚ್ಚರಿಸಿದೆ ಮನವನೆ

ನಮ್ಮ ನಲವ ಭವ್ಯ ನಿಧಿಯ
ಕದಿಯ ಬಂದ ಕ್ರೂರ ವಿಧಿಯ
ಕೋರಿದೆ ಸುಸ್ವಾಗತ

ಹೊನ್ನಗಳಸ ಧರೆಗುರುಳಿರೆ
ಹಣ್ಣ ಬೆಳಸ ಹುಳ ಕೊರೆದಿರೆ
ಸಹಿಸಿದೆ ನಗೆ ಸೂಸೂತ

ನಾವು ಬೇರೆ ದಾರಿ ಹಿಡಿದು
ಅಗಲಿ ಬಹಳ ದೂರ ನಡೆದು
ಸಂದಿದೆ ಮನ್ವಂತರ

ಗಾಳಿ ಜೊತೆಯ ಧೂಳಿನಂತೆ
ನೆಲೆಸಿದೆ ಬಾಳಲ್ಲಿ ಸಂತೆ
ನೆನಹಿನ ಕರಿಬೆಂತರ

ನಮ್ಮ ನಲಿವು ನೋವು ತುಡಿತ
ಹಳೆಗಾಲದ ಒಲವ ಕಡತ
ಭೂತೆಕಾಲಘೋಶದಿ

ಪ್ರಣಯ ವಿರಹವೆರಡು ಸರದಿ
ಈ ವ್ಯಾಧಿಯು ಬಹು ಅನಾದಿ
ಮರೆವೆಯೆ ದಿವ್ಯೌಷಧಿ

ತಡೆದು ತಡೆದು ಚಿಮ್ಮುವಂಥ
ಚಿಲುಮೆಯಲ್ಲ ಬಾಳ ಪಂಥ
ನದಿಯ ತೆರ ನಿರಂತರ

ಹಿಂದೆ ನಿನ್ನ ನೆನಹನ್ನೊರಸಿ
ಗತದಿನಗಳ ಬದಿಗೆ ಸರಿಸಿ
ನಿರಮಮ ಬಹಿರಂತರ

No comments:

Post a Comment